Sunday, December 20, 2009

ಮಾಣಿಯಲ್ಲಿ 'ಕೃಷಿ ಉತ್ಸವ'


ಬಂಟ್ವಾಳದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ 'ಕೃಷಿ ಉತ್ಸವ'ವು ಮಾಣಿಯಲ್ಲಿಂದು ಜರುಗಿತು. ಸಂಸದ ಶ್ರೀ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸಿ, ವೇದಿಕೆಯಲ್ಲಿ ಮುಂಭಾಗದಲ್ಲಿ ರೂಪಿಸಲಾಗಿದ್ದ 'ಬಾಕಿಮಾರು ಗದ್ದೆ'ಗೆ ಹಾಲೆರೆದು, ವೇದಿಕೆಯಲ್ಲಿದ್ದ ತುಳಸಿ ಕಟ್ಟೆಗೆ ದೀಪ ಜ್ವಲಿಸಿ ಉತ್ಸವಕ್ಕೆ ಚಾಲನೆ ಕೊಟ್ಟರು. ಶಾಸಕ ಶ್ರೀ ರಮಾನಾಥ ರೈ, ಹಿರಿಯರಾದ ಶ್ರೀ ಸಂಕಪ್ಪ ರೈ ವೇದಿಕೆಯಲ್ಲಿ ಉಪಸ್ಥಿತಿ.

ನಂತರ ವಿಚಾರ ಗೋಷ್ಠಿಗಳು. ವಿವಿಧ ವಿಚಾರಗಳ ಮಂಡನೆ. ಶ್ರೀ ಬಡೆಕ್ಕಿಲ ಶ್ಯಾಮಪ್ರಸಾದ್ ಶಾಸ್ತ್ರಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಂಧ ಬೆಳೆದ ಕೃಷಿಕ. ಅವರ ಅನುಭವ ಕಥನ - ಇಡೀ ಕೃಷಿ ಉತ್ಸವದ ಹೈಲೈಟ್! ಪವರ್ ಪಾಯಿಂಟ್ ಮೂಲಕ ವಿಚಾರದ ಪ್ರಸ್ತುತಿ.

ನಲವತ್ತಕ್ಕೂ ಮಿಕ್ಕಿದ ಮಳಿಗೆಗಳು. ಕಬ್ಬಿನ ಹಾಲಿನಿಂದ ಸ್ಪ್ರೇಯರ್ ತನಕ! ತರಕಾರಿ ಬೀಜಗಳಿಗೆ ಸ್ವಲ್ಪ ಮಟ್ಟಿನ ಆಸಕ್ತಿ. ಮಹಿಳೆಯರ ಒಲವು ನರ್ಸರಿಗಳತ್ತ - ಹೂ ಗಿಡಗಳತ್ತ!

'ಇಂತಹ ಕೃಷಿ ಉತ್ಸವಗಳಿಂದ ಕೃಷಿಯತ್ತ ಹೆಚ್ಚು ಆಸಕ್ತಿ ಹುಟ್ಟಿಸುವ ಮತ್ತು ಕೃಷ್ಯುತ್ಪನ್ನಗಳಿಗೆ ಗ್ರಾಹಕರನ್ನು ಸೆಳೆಯುವ ಅಜ್ಞಾತ ಕೆಲಸವಾಗುತ್ತಿದೆ. ಇದೊಂದು ಖುಷಿ ಉತ್ಸವ' - ಒಂದೇ ವಾಕ್ಯದಲ್ಲಿ ಮೇಳದ ಆಶಯವನ್ನು ಕಟ್ಟಿಕೊಟ್ಟರು ನಳಿನ್ ಕುಮಾರ್ ಕಟೀಲ್.

ಒಟ್ಟೂ ವ್ಯವಸ್ಥೆಯಲ್ಲಿ ಅಚ್ಚುಕಟ್ಟು-ಶಿಸ್ತು ಉತ್ಸವದ ಧನಾಂಶ.






Tuesday, December 15, 2009

ಮನೆಬಾಗಿಲಿಗೆ ವಿಷರಹಿತ ತರಕಾರಿ!

ಮೂಡಬಿದಿರೆಯ ವಿಶಾಲನಗರ ಐನೂರು ಮನೆಗಳಿರುವ ಬಡಾವಣೆ. ಲ್ಯಾನ್ಸಿ ಕ್ರಾಸ್ತಾರ ತರಕಾರಿ ಬೈಕ್ ಬಾರದಿದ್ದರೆ ಇಲ್ಲಿನ ಕೆಲವು ಮನೆಗಳಲ್ಲಿ ಅಡುಗೆಯೇ ಆಗುವುದಿಲ್ಲ!

ಮಾರ್ಕೆಟ್ನಲ್ಲಿ ತಾಜಾ ಹೊಳಪುಳ್ಳ ತರಕಾರಿಗಳೇನೋ ಲಭ್ಯ. ಆದರೆ ಲ್ಯಾನ್ಸಿ ತರುವ ವಿಷರಹಿತ ತರಕಾರಿಗಳನ್ನು ತಿಂದವರಿಗೆ ಅದು ಬೇಡ. ಇವು ಸಿಗುವಷ್ಟು ಕಾಲ ಅವರು ಮಾರ್ಕೆಟ್ ಕಡೆಗೆ ಸುಳಿಯುವುದೇ ಇಲ್ಲ.

ಲ್ಯಾನ್ಸಿಯವರ ತರಕಾರಿ ಕೃಷಿಗೀಗ ಹದಿಮೂರು ವರುಷ. 'ಸಾವಯವ ತರಕಾರಿ ಎಷ್ಟು ಒಯ್ದರೂ ಮಾರ್ಕೆಟ್ ಇದೆ. ನನ್ನ ಬೆಳೆಯನ್ನು ನಾನೇ ಮಾರ್ಕೆಟ್ ಮಾಡುತ್ತೇನೆ.' ಲ್ಯಾನ್ಸಿಯವರ ಈ ಸಾಧನೆಯ ಹಿಂದೊಂದು ಕತೆಯಿದೆ.

ಪೈಸೆಪೈಸೆಗೂ ತತ್ವಾರವಿದ್ದ ಅಂದು ಇವರಮ್ಮ ಸೆಲಿನ್ ಕ್ರಾಸ್ತಾ ಬಸಳೆ ಬೆಳೆದು ಕಟ್ಟು ಮಾಡಿ 'ಮಾರಿ ಬಾ' ಎಂದು ಕೈಗಿತ್ತರು. ಮಾರುಕಟ್ಟೆ ನೋಡಿ ಗೊತ್ತಿತ್ತೇ ವಿನಃ ಮಾರಾಟದ ಅನುಭವವಿರಲಿಲ್ಲ. ಕಟ್ಟಿಗೆ ಮೂರು ರೂಪಾಯಿಯಂತೆ ಕೊಟ್ಟದ್ದಾಂಯಿತು. ಇನ್ನೇನು ಸ್ಥಳ ಬಿಡಬೇಕು ಎನ್ನುವಾಗ ಅಂಗಡಿಯವ ಅದನ್ನೇ ಐದು ರೂಪಾಯಿಗೆ ಮಾರಿದ. ಲ್ಯಾನ್ಸಿಗೆ ಆಘಾತ. ಅಂದೇ, ಅಲ್ಲೇ 'ಮುಂದೆ ನಾನೇ ಮಾರುತ್ತೇನೆ' ಎಂಬ ಶಪಥ ಮಾಡಿದರು.

ಅದು ಒಂದೆಡೆ ಕುಳಿತು ಮಾಡುವ ವ್ಯಾಪಾರ. ನಗರಗಳಲ್ಲಿ ಗಾಡಿಗಳಲ್ಲಿ ಮಾರುವುದಿದೆ. ಇದೇ ದಾರಿ ತುಳಿದ ಲ್ಯಾನ್ಸಿ ಜನ ವಸತಿಯಿರುವಲ್ಲಿ 'ಬಸಳೆ..ಬಸಳೆ' ಎಂದು ಕೂಗಿದರು. ಒಂದೆರಡು ಗಂಟೆಯಲ್ಲೇ ಕೈಯಲ್ಲಿದ್ದ ಮ್ಹಾಲು ಖಾಲಿ. ಇವರಿಗೂ ಐದು ರೂಪಾಯಿ ಸಿಕ್ಕಿತು. ಮಧ್ಯವರ್ತಿಗಳಿಲ್ಲದ ವ್ಯಾಪಾರಕ್ಕೆ ನಾಂದಿ.

ತೊಂಡೆ, ಬೆಂಡೆ, ಅಲಸಂಡೆ, ಹರಿವೆ, ಹೀರೆ - ಹೀಗೆ ತರಕಾರಿಗಳ ಸಾಲು. ವಾರಕ್ಕೆ ಮೂರು ಸಲ ಸರಬರಾಜು. ನಿಶ್ಚಿತ ಗಿರಾಕಿಗಳು. ಸ್ಟಾಂಡರ್ ದರ. ನಗದು ವ್ಯವಹಾರ. 'ತರಕಾರಿ ಮಾರಿ ಹಿಂದಿರುಗುವಾಗ ಇವರ ಕಿಸೆ ನೋಡಬೇಕು' ಎಂದು ನೆರೆಯ ಕೃಷಿಕ ಎಡ್ವರ್ಡ್ ರೆಬೆಲ್ಲೋ ತಮಾಷೆ ಮಾಡುತ್ತಾರೆ!

ತೊಂಡೆಕಾಯಿಗೆ ಮಾರುಕಟ್ಟೆಯಲ್ಲಿ ಕಿಲೋಗೆ ಇಪ್ಪತ್ತು ರೂಪಾಯಿ ಇದ್ದರೆ ಲ್ಯಾನ್ಸಿ ಮಾರುಕಟ್ಟೆ ದರದ ಸರಾಸರಿ ಬೆಲೆ ನಿಗದಿ ಮಾಡುತ್ತಾರೆ. ಮಾರುಕಟ್ಟೆ ದರ ಏರಿದರೂ, ಇವರದು ಫಿಕ್ಸೆಡ್. ಅಲ್ಲಿ ಇಳಿದರೂ, ಇವರದು ಇಳಿಯುವುದಿಲ್ಲ!

ಬೆಳಿಗ್ಗೆ ವಿತರಣೆಗೆ ಹಿಂದಿನ ರಾತ್ರಿಯೇ ಸಿದ್ಧತೆ. ಅರ್ಧ, ಒಂದು ಕಿಲೋದ ಪೂರ್ವಪ್ಯಾಕಿಂಗ್. ಮನೆಮಂದಿಯ ಸಮಷ್ಠಿ ಕೆಲಸ. ಬೈಕ್ನ ಹಿಂದೆ ಕಳಚಿ ಜೋಡಿಸಬಲ್ಲ (ಡಿಟೇಚೇಬಲ್) ಸ್ಟಾಂಡ್ ಮಾಡಿಸಿದ್ದಾರೆ. ಜಾಗವಿರುವಲ್ಲೆಲ್ಲಾ ತರಕಾರಿ ಚೀಲ ಇಳಿಬಿಡುತ್ತಾರೆ. ಇದನ್ನು 'ತರಕಾರಿ ಬೈಕ್' ಅನ್ನೋಣ.

'ನನ್ನನ್ನು ಕಾಯುವ ಐವತ್ತು ಮನೆಗಳಿಗೆ ಬೆಳಿಗ್ಗೆ 9 - 10 ರೊಳಗೆ ತರಕಾರಿ ಕೊಡಬೇಕು. ನಂತರ ಹೆಚ್ಚಿನವರೂ ಡ್ಯೂಟಿಗೆ ಹೋಗುತ್ತಾರೆ. ನಂಬಿದ ಮನೆಯವರಿಗೆ ತೊಂದರೆಯಾಗಬಾರದಲ್ಲಾ' ಎನ್ನುವ ಕಾಳಜಿ. ಒಂದು ದಿನವೂ ಮಾರಾಟವಾಗಿಲ್ಲ ಎಂದು ಪುನಃ ತಂದುದಿಲ್ಲವಂತೆ.

ಶಿಕ್ಷಕರು, ವ್ಯಾಪಾರಸ್ಥರು, ಕಚೇರಿಗೆ ಹೋಗುವ ವಿವಿಧ ಕುಟುಂಬಗಳ ಸಂಪರ್ಕ. 'ಐವತ್ತಲ್ಲ, ನೂರು ಮನೆಗಳಿಗೂ ಕೊಡುವಷ್ಟು ಬೇಡಿಕೆಯಿದೆ. ಆದರೆ ಪೂರೈಸಲು ಕಷ್ಟ.' ಇವರ ಮಾರಾಟತಂತ್ರವನ್ನು ಇನ್ನೂ ಕೆಲವರು ಅನುಸರಿಸಿದರಂತೆ. ಇವರಿಗಿಂತ ಮೊದಲೇ ತಲಪಿ ಮಾರಿ ಪೈಪೋಟಿ ಕೊಡಲು ಯತ್ನಿಸಿದರಂತೆ. ಆದರೆ ಕಡಿಮೆ ಗುಣಮಟ್ಟ ಮತ್ತು ಅಸಮರ್ಪಕ ಪೂರೈಕೆಯ ಕಾರಣ ಈ ಗಿರಾಕಿಗಳೇ ಅವರನ್ನು ತಿರಸ್ಕರಿಸಿಬಿಟ್ಟರು.

ತಾಜಾ ತರಕಾರಿಯನ್ನೇ ಕೊಡುತ್ತಾರೆ. ಅಕಸ್ಮಾತ್ ಕೆಲವೊಮ್ಮೆ ಸ್ವಲ್ಪ ಬಾಡಿದ್ದರೆ, ಹುಳು ಹಿಡಿದಿದ್ದರೆ, 'ಇದು ಅಷ್ಟು ಚೆನ್ನಾಗಿಲ್ಲ' ಅಂತ ಹೇಳುತ್ತಾರೆ. ದರದಲ್ಲಿ ಹೊಂದಾಣಿಕೆ. ಈ ಪಾರದರ್ಶಕತೆ ವಿಶಾಲನಗರದಲ್ಲಿ ಇವರಿಗೆ ಹೆಸರು ತಂದಿದೆ.
ಮದುವೆ, ಹಬ್ಬಗಳಂದು ಕೆಲವರು ಮುಂದಾಗಿ ಕಾದಿರಿಸುತ್ತಾರೆ. ಮನೆಗೆ ಬಂದು ಒಯ್ಯುವವರೂ ಇದ್ದಾರೆ. ಮನೆಯಿಂದ ಹಿರಡುವ ತರಕಾರಿ ಬೈಕಿಗೆ ದಾರಿಯ ಮಧ್ಯೆ ಕೆಲವು ನಿಲುಗಡೆ.

ದಶಂಬರದಿಂದ ಮೇ ತನಕ ತರಕಾರಿ ಋತು. 'ಆರು ತಿಂಗಳು ನಮ್ಮನ್ನು ತರಕಾರಿ ಸಾಕುತ್ತದೆ', ಲ್ಯಾನ್ಸಿಯವರ ತಂದೆ ರಾಬರ್ಟ್ ಕ್ರಾಸ್ತಾ ಹೇಳುತ್ತಾರೆ. ಅಷ್ಟು ಕಾಲ ಇವರ ವಿಷರಹಿತ ತರಕಾರಿಯ ರುಚಿಯುಂಡ ಗ್ರಾಹಕರು, ಉಳಿಗಾಲದಲ್ಲಿ ಮಾರ್ಕೆಟನ್ನು ಆಶ್ರಯಿಸಬೇಕು. ಆಗ ರುಚಿ ವ್ಯತ್ಯಾಸ ಗೊತ್ತಾಗುತ್ತದೆ. ಜನ 'ನಿಮ್ಮದು ಎಂತಹ ರುಚಿ ಮಾರಾಯ್ರೆ' ಅಂತ ಪ್ರತಿಕ್ರಿಯಿಸುತ್ತಾರೆ. ಈ ಅಭಿಪ್ರಾಯ ಇವರ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿಸುತ್ತದೆ.

ಎರಡು ವರುಷದ ಹಿಂದೆ ಬಂಪರ್. ಬೆಲೆಯೂ, ಬೆಳೆಯೂ. ಆಗ ವಾರಕ್ಕೆ ಮೂರ್ನಾಲ್ಕು ಸಲ 'ತರಕಾರಿ ಬೈಕಿ'ಗೆ ಕೆಲಸ. ಈ ವರುಷ ಕಡಿಮೆ. ವಾರಕ್ಕೆ ಎರಡೇ ಸಲ. ಸರ್ತಿಗೆ ಐನೂರರಿಂದ ಸಾವಿರದ ಸಂಪಾದನೆ.

ನಾಲ್ಕು ವರುಷದ ಹಿಂದಿನ ವರೆಗೆ ರಿಕ್ಷಾ ಇತ್ತು. ತರಕಾರಿ ಕೊಟ್ಟು ಮರಳುವಾಗ ದಾರಿಗುಂಟ ಬಿದ್ದಿರುವ ಸೆಗಣಿ ಹೆಕ್ಕಿ ತರುತ್ತಿದ್ದರು. ಕೆಲವರು ಗೇಲಿ ಮಾಡುತ್ತಿದ್ದರಂತೆ! 'ರಿಕ್ಷಾದಲ್ಲಿ ತರಕಾರಿ ಕೊಂಡೊಯ್ಯಲು ಸುಲಭ. ಕ್ರಮೇಣ ಬಾಡಿಗೆಗೆ ರಿಕ್ಷಾ ಅಪೇಕ್ಷಿಸಿ ಬರುವವರ ಸಂಖ್ಯೆ ಹೆಚ್ಚಾಗಿ, ಕೃಷಿಯತ್ತ ಗಮನ ಕಡಿಮೆಯಾಗತೊಡಗಿತು. ಹೊತ್ತಿಲ್ಲ, ಗೊತ್ತಿಲ್ಲ! ಹಾಗಾಗಿ ರಿಕ್ಷಾ ಮಾರಿದೆ. ಬೈಕ್ ತೆಕ್ಕೊಂಡೆ' ಎನ್ನುತ್ತಾರೆ.

ಒಟ್ಟು ಮೂರೂವರೆ ಎಕರೆ ಜಮೀನು. ಅದರಲ್ಲಿ ಒಂದೂವರೆ ಎಕರೆ ಹುಲ್ಲು. ಇಪ್ಪತ್ತು ಸೆಂಟ್ಸ್ನಲ್ಲಿ ತರಕಾರಿ. ಉಳಿದಂತೆ ಅಡಿಕೆ ಕೃಷಿ. ಜತೆಗೆ ಹೈನುಗಾರಿಕೆ. ಪತ್ನಿ ಸೆವೆರಿನ್ ಕ್ರಾಸ್ತಾರ ಉಸ್ತುವಾರಿಕೆ.

ತರಕಾರಿ ಕೃಷಿಯನ್ನು ಇನ್ನಷ್ಟು ವಿಸ್ತರಿಸಬಹುದಲ್ಲಾ? 'ಬೇಡಿಕೆ ಉಂಟೆಂದು ತರಕಾರಿ ಹೆಚ್ಚು ಮಾಡಿದರೆ ನಿರ್ವಹಣೆ ಕಷ್ಟ. ನನ್ನ ಈಗಿನ ವ್ಯವಸ್ಥೆಗೆ ಇಷ್ಟು ತರಕಾರಿ ಕೈತುಂಬಾ ಕೆಲಸ ಕೊಡುತ್ತದೆ.'

Sunday, December 13, 2009

ಡಿಸೆಂಬರಿನಲ್ಲಿ ಮಾವು!

ಜಾಗತಿಕ ತಾಪಮಾನದ ಕುರಿತು ಒಂದೆಡೆ ಕೊಪನ್ ಹೆಗನ್ ನಲ್ಲಿ ಒಂದೆಡೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಜುನಾಗಢದ ರೈತರ ಮುಖದಲ್ಲಿ ಅದು ಮಂದಹಾಸ ಸೃಷ್ಟಿಸಿದೆ. ಬಿರು ಬೇಸಗೆಯಲ್ಲಿ ಕಟಾವಿಗೆ ಬರಬೇಕಿದ್ದ ಮಾವಿನ ಹಣ್ಣು ಈ ಬಾರಿ ಚಳಿಗಾಲದ ನಡುವೆಯೆ ಬೆಳೆದು ನಿಂತಿರುವುದು ರೈತರಲ್ಲಿ ಸಂತಸವುಂಟುಮಾಡಿದೆ.

'ಇದೊಂದು ಅದ್ಭುತ. ಇದಕ್ಕೂ ಮುನ್ನ ಡಿಸೆಂಬರಿನಲ್ಲಿ ಮಾವಿನ ಬೆಳೆಯನ್ನು ನೋಡಿಯೇ ಇಲ್ಲ. 2009ರಲ್ಲಿ ಮೊದಲ ಬಾರಿಗೆ ಮಾವಿನ ಕೊಯಿಲು ನಡೆಯುತ್ತಿದೆ' ಎಂದು ವಿಶೇಷ ಕೇಸರ್ ಜಾತಿಯ ಮಾವು ಕೃಷಿ ಕೈಗೊಂಡಿರುವ ಚಂದೂಬಾಯ್ ಘೆಸಾಡಿಯಾ ಹೇಳಿದ್ದಾರೆ.

'ವಾಸ್ತವವಾಗಿ ಮಾವಿನ ಹಣ್ಣು ಮೇ ಇಲ್ಲವೇ ಜೂನ್ ತಿಂಗಳಲ್ಲಿ ಕೊಯಿಲಿಗೆ ಸಿದ್ಧವಾಗಿರುತ್ತದೆ. ಆದರೆ ಈ ಬಾರಿ ಡಿಸೆಂಬರ್ ತಿಂಗಳಲ್ಲಿ ಮಾವಿನಹಣ್ಣು ಸಿಗುತ್ತಿರುವುದು ಆಶ್ಚರ್ಯವುಂಟುಮಾಡುತ್ತಿದೆ' ಎಂದು ಮತ್ತೋರ್ವ ರೈತ ಬಿಫುಲ್ ಬಾಯ್ ಅಕ್ಬಾರಿ ಹೇಳಿದ್ದಾರೆ.

ಗುಜರಾತಿನ ಒಂದು ಲಕ್ಷದ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ಕೇಸರ್ ತಳಿಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತಿದೆ. ಆದರೆ ಹವಾಮಾನ ಬದಲಾವಣೆ ಮಾವಿನ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಡಿಸೆಂಬರಿನಲ್ಲಿ ಮಾವು ಕೊಯ್ಲಿಗೆ ಬಂದಿರುವುದು ಅಪಾಯಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

(ಕೃಪೆ: ಉದಯವಾಣಿ: 13-12-2009, ಪುಟ 5)

Saturday, December 12, 2009

ಸಾವಯವದ ದೊಡ್ಡ ಹೆಜ್ಜೆ : 'ಎರಾ'

ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯಿತು. ಬರೋಬ್ಬರಿ ಮಳಿಗೆಗಳು. ಚರುಮುರಿಯಿಂದ ಟ್ರಾಕ್ಟರ್ ತನಕ! ಆರುನೂರು ಮಳಿಗೆ ಸುತ್ತು ಹಾಕಿ ನಿಂತಾಗ ಸಾಕೋ ಸಾಕು! ಈ ಮಧ್ಯೆ ರೈತ ಮಟ್ಟದಲ್ಲಿ ಸಾವಯವದ ಕಾಳಜಿ ಹೊತ್ತ ಅದನ್ನು ವೃತದಂತೆ ನಿಭಾಯಿಸುವ ಕೆಲವೇ ಕೆಲವು ರೈತರ ಮಳಿಗೆಗಳು ಹೆಚ್ಚು ಗಮನ ಸೆಳೆದುವು. ಬೆಂಗಳೂರಿನ 'ಎರಾ ಆರ್ಗಾನಿಕ್’ ಇಂತಹ ಮಳಿಗೆಗಳಲ್ಲಿ ಒಂದು.

ಎರಾದ ರೂವಾರಿ ಜಯರಾಮ್. ಸಂಸ್ಥೆ ಹುಟ್ಟಿಗೆ ದಿಕ್ಕು ತೋರಿದ್ದು ಜರ್ಮನಿಯ ಸಾವಯವ ಸಮ್ಮೇಳನ. ಅಲ್ಲಿ ಸಾಮಾನ್ಯ ಗ್ರಾಹಕನೂ (ರೈತ) ಮಾರುಕಟ್ಟೆ ಹಿಡಿವ ರೀತಿ. ಈ ಕುರಿತು ಮಾಹಿತಿ ಸಂಗ್ರಹ. ಆರಂಭ2007 ಎಪ್ರಿಲ್ನಲ್ಲಿ. ಜೀವನಾವಶ್ಯಕ ವಸ್ತುಗಳೆಲ್ಲಾ ಇಲ್ಲಿ ಲಭ್ಯ. ತರಕಾರಿ, ಧಾನ್ಯಗಳಿಂದ ತೊಡಗಿ ಅಂಗಿ-ಬನಿಯನ್ ತನಕ!

ಆಂಧ್ರದ ಸಾವಯವ ಹತ್ತಿ ಬಟ್ಟೆಯ ಅಂಗಿ; ಪಾಂಡಿಚೇರಿಯ ಸಿದ್ಧ ಉಡುಪುಗಳು, ಚೆನ್ನೈಯ ಕಡ್ಲೆಕಾಯಿ ಎಣ್ಣೆ, ಗಾಣ ಎಣ್ಣೆ, ಅಕ್ಕಿ, ಬೆಲ್ಲ; ಕೇರಳದ ಸಂಬಾರವಸ್ತು, ಕೆಂಪಕ್ಕಿ, ಗೇರುಬೀಜ, ಕರಕುಶಲವಸ್ತು; ಕೊಡೈಕನಾಲ್ನಿಂದ ಕ್ಯಾರೆಟ್, ತರಕಾರಿ, ಹಲಸಿನಹಣ್ಣು; ಊಟಿಯ ಚಹ; ಹಿಮಾಚಲ ಪ್ರದೇಶದಿಂದ ಸೇಬು; ಮೈಸೂರಿನಿಂದ ಜ್ಯಾಂ, ಉಪ್ಪಿನಕಾಯಿ; ಬೆಳಗಾಂನಿಂದ ಬೆಲ್ಲ, ಈರುಳ್ಳಿ; ಗದಗದಿಂದ ಗೋಧಿ, ಹಸಿ ಕಡ್ಲೆ; ಧಾರವಾಡ-ಮಂಡ್ಯಗಳಿಂದ ಬೆಲ್ಲ, ಕೊಡಗಿನ ಕಿತ್ತಳೆ - ಹೀಗೆ ಇಲ್ಲಿನ 'ವಿಶೇಷ'ಗಳ ಪಟ್ಟಿ ದೊಡ್ಡದು.
'ಎರಾ ಆರ್ಗಾನಿಕ್’ ಸ್ವಿಜéರ್ಲ್ಯಾಂಡ್ ಮೂಲದ ಅಂತಾರಾಷ್ಟ್ರೀಯ ಸಂಸ್ಥೆ ಐಎಂಒದಲ್ಲಿ ನೋಂದಣಿ. ಇದರಲ್ಲಿ ದೃಢೀಕರಣಗೊಂಡ ರೈತರು, ಸಂಸ್ಥೆಗಳು ದೇಶದುದ್ದಕ್ಕೂ ಬಹಳಷ್ಟಿದ್ದಾರೆ. ಇವರಿಂದ ಉತ್ಪನ್ನ ಖರೀದಿ. ಇದಕ್ಕಾಗಿ ಜಯರಾಮ್ ಎಲ್ಲಾ ರಾಜ್ಯಗಳ ಸಾವಯವ ಮಾರಾಟ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ.

ಖರೀದಿಸುವ ಉತ್ಪನ್ನಗಳಿಗೆ ಎರಾ ದರ ನಿಗದಿ ಮಾಡುವುದಿಲ್ಲ. ರೈತರ ದರಕ್ಕೆ ಶೇ.20-30 ಸೇರಿಸಿ ಮಾರಾಟ. ಬೇಗ ಕೆಡುವ ತರಕಾರಿ, ಹಣ್ಣುಗಳಂತಹ ವಸ್ತುಗಳಿಗೆ ಶೇ.40ರ ತನಕ ಹೆಚ್ಚು. 'ಸಾವಯವ ತರಕಾರಿ, ಸೊಪ್ಪುಗಳಂತಹ ವಸ್ತುಗಳ ಲಭ್ಯತೆ ಬೆಂಗಳೂರು ಸುತ್ತಮುತ್ತ ಸೀಮಿತ. ದೂರದೂರಿಂದ ಬರುವ ವಸ್ತುವಿಗೆ ದರ ಏರಿಕೆ ಅನಿವಾರ್ಯ'.

ಸಿಗುವ ತರಕಾರಿಗಳು ಸ್ಥಳೀಯ. ಬೇಡಿಕೆಯಷ್ಟು ಸಿಗುತ್ತಿಲ್ಲ. ಸಿಕ್ಕರೂ ಸಾವಯವವಲ್ಲ! ಸಮಯಕ್ಕೆ ಸರಿಯಾಗಿ ಸಿಗದಿದ್ದಾಗ 'ಸಾತ್ವಿಕ ಜಗಳ ಆಡುವ' ಗ್ರಾಹಕರೂ ಇದ್ದಾರೆ! ಇದನ್ನರಿತ ಜಯರಾಂ ತನ್ನ ತೋಟದಲ್ಲಿ ಸೊಪ್ಪುತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. 'ಗಿರಾಕಿಗಳಿಗೆ ಉತ್ಪನ್ನಗಳನ್ನು ಪ್ಯಾಕ್, ಸೀಲ್ ಮಾಡಿದರಷ್ಟೇ ಖುಷಿ. ಇಲ್ಲದಿದ್ದರೆ ಒಯ್ಯುವುದೇ ಇಲ್ಲ. ಪ್ಯಾಕಿಂಗ್ ಫಸ್ಟ್ - ಪ್ರಾಡಕ್ಟ್ ನೆಕ್ಸ್ಟ್!

'ಎರಾ'ಕ್ಕೆ ಜಯರಾಮ್ ಸಾಂಸ್ಥಿಕ ರೂಪ ನೀಡಿದ್ದಾರೆ. ಗ್ರಾಹಕರೇ ಸದಸ್ಯರು. ಐವರು ಸಿಬ್ಬಂದಿ. ಎಲ್ಲರಿಗೂ ಸಮವಸ್ತ್ರ. ವ್ಯವಹಾರದ ಅವಧಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9.30. ಆರು ತಿಂಗಳಲ್ಲಿ ಮಣ್ಣಾಗುವ ಬಯೋಡಿಗ್ರೇಡೇಬಲ್ ಪ್ಲಾಸ್ಟಿಕ್ ಬಳಕೆ. ಬಟ್ಟೆಯ ಚೀಲ ತಂದವರಿಗೆ ಬಿಲ್ಲಿನಲ್ಲಿ ಒಂದು ರೂಪಾಯಿ ಕಡಿತ!

ಮಳಿಗೆ ಪೂರ್ತಿ ಪರಿಸ್ನೇಹಿ. ಗೋಡೆ ತುಂಬಾ ಹಸೆ ಚಿತ್ರ. ಕಲ್ಲು, ಮರ, ಬೇರು ಬಳಸಿದ ರ್ಯಾಕ್ಗಳು. ವ್ಯವಸ್ಥಿತವಾಗಿ ಪೇರಿಸಿಟ್ಟ ಸಾವಯವ ಉತ್ಪನ್ನಗಳು. ಮಹಡಿಯಲ್ಲಿ ಸಭಾಭವನ. ಕಿಟಕಿಗೆ ಲಾವಂಚದ ಪರದೆ. ಸೌರವಿದ್ಯುತ್. ಜಲಮರುಪೂರಣ. ಗೋಡೆಗಳಲ್ಲಿ ಪಾರಂಪರಿಕ ಹಸೆಚಿತ್ತಾರ. ಮಹಾರಾಷ್ಟ್ರದ 'ವರ್ಲಿ' ವರ್ಣಚಿತ್ರಗಳು.

ಗ್ರಾಹಕರ ವಿಳಾಸ ದಾಖಲೆ. ಬಹುತೇಕ ಕೊಳ್ಳುಗರು ಪಟ್ಟಣಿಗರಾದ್ದರಿಂದ, 'ಸಾವಯವ ಕೃಷಿ' ನೋಡಿದ ಅನುಭವವಿರುವುದಿಲ್ಲ. ಆಸಕ್ತ ಗ್ರಾಹಕರಿಗೆ ಪ್ರತಿ ತಿಂಗಳು ತೋಟ ಭೇಟಿ ಮೂಲಕ ಸಾವಯವ ಕೃಷಿಯನ್ನು ಪರಿಚಯ. ಜತೆಗೆ ತಿಂಗಳೊಂದು ಮುಖಾಮುಖಿ ಕಾರ್ಯಕ್ರಮ.

ಬೇರೆ ಪ್ರಮಾಣೀಕೃತ ಸಂಸ್ಥೆಗಳು ಅಂಗೀಕರಿಸಿದ ಉತ್ಪನ್ನಗಳನ್ನು ಇವರು ಖರೀದಿಸುತ್ತಾರೆಯೇ? 'ದೃಢೀಕರಣ ಕೊಟ್ಟ ಕಂಪೆನಿ ಐಎಂಒಗೆ ಸುದ್ದಿ ತಿಳಿಸುತ್ತಿರುತ್ತದೆ. ಐಎಂಒ ನಮಗೆ. ನಮ್ಮ ಪಟ್ಟಿಗೆ ಹೆಸರು ಸೇರಿದಾಕ್ಷಣ ಉತ್ಪನ್ನಗಳನ್ನು ಎರಾಕ್ಕೆ ತರಬಹುದು.'
ರೈತರ ತೋಟಗಳ 'ಗುಂಪು ದೃಢೀಕರಣ'ಕ್ಕೂ ಮಾಡುವ ಎರಾ ವ್ಯವಸ್ಥೆ ಮಾಡುತ್ತದೆ. ಇದಕ್ಕೆ ಐಎಂಓದ ಕೆಲವೊಂದು ನಿಯಮಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ತೋಟಕ್ಕೆ ಬಂದು ಪರೀಕ್ಷಿಸಿ ತ್ರೃಪ್ತಿಯಾಗಬೇಕು. ಬೆಂಗಳೂರು ಸುತ್ತಮುತ್ತ ಅರುವತ್ತೈದಕ್ಕೂ ಹೆಚ್ಚು ತೋಟಗಳು ಈಗಾಗಲೇ ದೃಢೀಕರಣಗೊಂಡಿವೆ; ಇನ್ನಷ್ಟು ಯತ್ನ ನಡೆದಿದೆ.

ಜಯರಾಂ ನ್ಯಾಯವಾದಿ. ನಲವತ್ತೆರಡು ಎಕ್ರೆಯಲ್ಲಿ ಸಾವಯವ ಕೃಷಿಯನ್ನೂ ಮಾಡುತ್ತಾರೆ. ''ಬದುಕಿಗೆ ಸಾಕಷ್ಟು ಸಂಪಾದನೆಯಿದೆ. ವೃತ್ತಿಗೆ ತೊಂದರೆಯೆಂಬುದನ್ನು ತಿಳಕೊಂಡೇ ಈ ಚಳುವಳಿಗೆ ಧುಮುಕಿದ್ದೇನೆ. ಇದರಲ್ಲಿ ಖುಷಿಯಿದೆ. ಕೃಷ್ಯುತ್ಪನ್ನವನ್ನು ಕೊಳ್ಳುವವರಿಲ್ಲ. ಪಟ್ಟಭದ್ರ್ರರ ಹಿಡಿತದಲ್ಲಿರುವ ಮಾರುಕಟ್ಟೆಗೆ ಒಯ್ದರೂ, ಕೀಳಾಗಿ ಕಾಣುವ ಪ್ರವೃತ್ತಿ. ಎರಾ ಸ್ಥಾಪನೆಗೆ ಇದೂ ಒಂದು ಕಾರಣ.

(ಎರಾ ಆರ್ಗಾನಿಕ್ #348, ಡಾಲರ್ಸ್ ಕಾಲನಿ, ಆರ್.ಎಮ್.ವಿ.ಕ್ಲಬ್ ಡಬಲ್ ರೋಡ್, ಆರ್.ಎಮ್.ವಿ. ಎರಡನೇ ಹಂತ, ಬೆಂಗಳೂರು - 560 094 ದೂರವಾಣಿ: 080-32007273, 99005 43881)

Saturday, December 5, 2009

ಸುಭಗತೆಗೆ ಅಲಿಖಿತ 'ಪೇಟೆಂಟ್'!

ಧಾರವಾಡದ ಕೃಷಿ ಮೇಳದಲ್ಲಿ ಕೃಷಿ ಸಲಕರಣೆಗಳ ಮಳಿಗೆಯೊಂದಿತ್ತು. ಕತ್ತಿ, ಚೂರಿ, ಮಚ್ಚು...ಗಳು ಸಾಲಾಗಿ ಜೋಡಿಸಿದ್ದುವು. ಇವುಗಳ ವಿಶೇಷವಿರುವುದು ಅವುಗಳ 'ಹಿಡಿ'ಯ ನೋಟದಲ್ಲಿ! ಅವು ಪೈಬರ್ನಿಂದ ತಯಾರಿಸಿದವುಗಳು. ಬಹಳ ಆಕರ್ಷಕವಾದ ನೋಟ. ಅಷ್ಟೇ ಹರಿತ. ಎಲ್ಲವೂ ಕಂಪೆನಿ ತಯಾರಿಗಳು. ಮುಂದಿನ ದಿನಗಳಲ್ಲಿ ಇವಕ್ಕೆ ಪೇಟೆಂಟ್ ಸಿಕ್ಕರೂ ಆಶ್ಚರ್ಯವಿಲ್ಲ.
ಆದರೆ ಇಲ್ಲಿ ವಿಷಯ ಮುಖ್ಯವಾಗುವುದು ಪೇಟೆಂಟ್ ಕುರಿತಾಗಿ ಅಲ್ಲ. ಮಳಿಗೆಯಲ್ಲಿ ಆಕರ್ಷಕವಾಗಿ ಕಾಣುವ 'ನೋಟ' (ಫಿನಿಶಿಂಗ್) - ಅದರ ಯಶಸ್ಸು. ಇಂತಹ 'ಕಾಣುವ ನೋಟ'ದ ಹೊರತಾಗಿ, ಅದರ ಗುಣಮಟ್ಟದಲ್ಲಿ ನೋಟವನ್ನು ಕೊಡುವ ಜಾಣರು ನಮ್ಮ ಹಳ್ಳಿಗಳಲ್ಲಿ ಈಗಲೂ ಇದ್ದಾರೆ.

ಫೈಬರ್ ಹಿಡಿಯನ್ನು ಕಂಡಾಗ, ನನ್ನೂರಿನ ಅಪ್ಪಣ್ಣ ಆಚಾರ್ಯರು ನೆನಪಾದರು. ಇಡೀ ಗ್ರಾಮದಲ್ಲಿ ಕತ್ತಿ, ಮಚ್ಚು, ಗರಗಸಗಳ ಅಲಗು ತುಂಡಾದರೆ, ಹರಿತ ಕಡಿಮೆಯಾದರೆ ಪರಿಕರದೊಂದಿಗೆ ಆಚಾರ್ಯರ ಮನೆಮುಂದೆ ಪ್ರತ್ಯಕ್ಷರಾಗುವ ಮಂದಿ! ಅವರು ಕತ್ತಿ, ಮುಟ್ಟಿಯನ್ನು ಒಮ್ಮೆ ಕುಲುಮೆಯಲ್ಲಿಟ್ಟು, ನೀರಲ್ಲಿ ಅದ್ದಿ, ಮುಟ್ಟಿಯಿಂದ ನಾಲ್ಕೈದು ಪೆಟ್ಟು ಬಡಿದರೆ ಸಾಕು, ಮತ್ತೆ ಆರು ತಿಂಗಳಿಗೆ ಇವರ ಕುಟೀರಕ್ಕೆ ಬರುವುದೇ ಬೇಡ. ಅಷ್ಟು ಹಿಡಿತ, ನೋಟ. ಜತೆಗೆ ಕೈಗುಣವೂ! ಹೀಗಾಗಿ ಇವರ ತಯಾರಿ ಕುಟೀರದ ಮುಂದೆ ಜನಸಂದಣಿಯಿರುತ್ತಿತ್ತು.

ಇನ್ನೊಬ್ಬರು ಆನಂದ ಆಚಾರ್ಯರು. ಇವರು ಯಕ್ಷಗಾನ ಅರ್ಥಧಾರಿಗಳು. ಕತ್ತಿಯ ಅಲಗಿಗೆ ಕಾಯಕಲ್ಪ ಕೊಡುವಲ್ಲಿ ಎತ್ತಿದ ಕೈ. ಯಕ್ಷಗಾನದ ಸುದ್ದಿ ಮಾತನಾಡುತ್ತಾ, ಕುಲುಮೆಯ ಚಕ್ರವನ್ನು ನಾವೇ ತಿರುಗಿಸಿ ಸಹಕರಿಸಿದರೆ ಒಂದಿಪ್ಪತ್ತು ನಿಮಿಷದಲ್ಲಿ ಕತ್ತಿ ಹರಿತವಾಗಿ ನಿಮ್ಮ ಕೈಗೆ. ಕುಲುಮೆ ಕಾಯಕ ಅವರಿಗೆ ಹೊಟ್ಟೆಪಾಡು. ಆದರೆ ಅದರಲ್ಲಿರುವ ಪ್ರೀತಿ ಮತ್ತು ಫಿನಿಶಿಂಗ್ ಕಂಡಾಗ ಕಂಪೆನಿಗಳೂ ನಾಚಬೇಕು.

ಇನ್ನೊಬ್ಬರು ದೇರಪ್ಪ ಆಚಾರ್ಯ. ಇವರು ವರುಷಪೂರ್ತಿ ಬ್ಯುಸಿ! ಮನೆಯ ಸೂರನ್ನು ನಿರ್ಮಿಸುವುದರಲ್ಲಿ ಪರಿಣತ. ಮನೆಯ ಆಯ - ಉದ್ದಗಲದ ಅಳತೆ ಕೊಟ್ಟರೂ ಸಾಕು. ಒಂದೈದು ನಿಮಿಷದಲ್ಲಿ 'ಕ್ಯಾಲಿಕ್ಯುಲೇಟರ್ ಇಲ್ಲದೆ' ನಿರ್ಮಿಸಲುದ್ದೇಶಿಸಿದ ಮನೆಗೆ ಎಷ್ಟು ಮರ ಬೇಕು, ಎಷ್ಟು ಹಂಚು ಬೇಕು, ಎಷ್ಟು ಆಣಿ ಬೇಕು.. ಎಂಬ ಲೆಕ್ಕಾಚಾರ ಮುಂದಿಡುತ್ತಾರೆ.

ಮನೆಯ ಸೂರಿನ ಮರದ ಕೆಲಸಗಳು ಬಹಳ ಸೂಕ್ಷ್ಮ ಮತ್ತು ಜಾಣ್ಮೆ ಬೇಡುವಂತಹುದು. ಇವರು ಉಳಿ-ಗೀಸುಳಿಯೊಂದಿಗೆ ಮರವನ್ನು ಮುಟ್ಟಿದರೆ ಸಾಕು, ಬೇಕಾದಂತೆ ಬಾಗುತ್ತದೆ-ಬಳುಕುತ್ತದೆ! ಅವರ ಕೈಯಲ್ಲಿ ಒಂಚೂರು ಮರವೂ ವ್ಯರ್ಥವಾಗುವುದಿಲ್ಲ.
ಸೂರಿಗೆ ಬೇಕಾದ ಎಲ್ಲಾ ಮರಗಳು ವಿನ್ಯಾಸವಾದ ಬಳಿಕ ಮಾಡಿಗೆ ಏರಿ ಪಕ್ಕಾಸುಗಳನ್ನೆಲ್ಲಾ ಸಿಕ್ಕಿಸಿ, ಹಂಚು ಜೋಡಿಸಿ ಕೆಳಗಿಳಿದಾಗಲೇ ಆಚಾರ್ಯರ ಕೆಲಸ ಮುಗಿಯುವುದು! ಇವರ ಕೆಲಸದಲ್ಲಿನ ನೂಜೂಕು ಇದೆಯಲ್ಲಾ - ನಮ್ಮ ಯಾವ ತಾಂತ್ರಿಕ ಪಠ್ಯದಲ್ಲೂ ಇಲ್ಲದಂತಹ ಸಂಗತಿ.

ಇತ್ತೀಚೆಗೆ ಒಬ್ಬರು ಹೇಳಿದರು 'ಎಂತಹ ಕೆಲಸವನ್ನೂ ಮಾಡಬಹುದು, ಏನಂತೆ'! ಇದು ಉಡಾಫೆಯಂತೆ ಕಂಡರೂ, ನಮ್ಮಲ್ಲಿ ಉತ್ತರ ಕರ್ನಾಟಕದಿಂದ ಬಂದ ಶ್ರಮಿಕರು ತೋಟದ ಕೆಲಸ ಮಾಡಿಲ್ಲವೇ? ಆದರೆ ಮಾಡಿದ ಕೆಲಸದಲ್ಲಿರುವ ಫಿನಿಶಿಂಗ್ - ಇದಕ್ಕೆ ಅನುಭವ ಮತ್ತು ಕೆಲಸದಲ್ಲಿನ ಪ್ರೀತಿ ಮಾನದಂಡ. ಜತೆಗೆ ಅದೃಷ್ಟವೂ! ಇದು ಎಲ್ಲರಿಗೂ ಬರುವುದಿಲ್ಲ.

ನನ್ನಜ್ಜಿ ಮನೆಯಲ್ಲಿ ಎತ್ತುಗಳ ಮೂಲಕ ಗದ್ದೆ ಬೇಸಾಯ. ಗದ್ದೆ ಉಳುವಲ್ಲಿ ಮುಂಡಪ್ಪ ಮೂಲ್ಯ ಎಂಬವರು ಸ್ಪೆಷಲಿಸ್ಟ್. ಎಂತಹ ರಂಪಾಟ ಮಾಡುವ ಎತ್ತುಗಳೇ ಆಗಲಿ, ಅವನ್ನು ಗದ್ದೆಗೆ ಇಳಿಸಿ ನೊಗವಿರಿಸಿ, ನೇಗಿಲು ಹಿಡಿದು 'ಹೂಂ..ಪಡ..ಪಡ..' ಅಂತ 'ಹೂಟೆಭಾಷೆ'ಯಲ್ಲಿ ಮಾತನಾಡಿದರೆ ಸಾಕು, ಅವರು ಹೇಳಿದಂತೆ ಕೇಳುತ್ತವೆ!

'ಮುಂಡಪ್ಪರು ಗದ್ದೆಗಳಿದರೆ ಮತ್ತೆ ಅತ್ತ ಕಡೆ ಮನೆಯಜಮಾನ ಹೋಗಬೇಕಿಲ್ಲ' ಎಂಬ ಪ್ರತೀತಿಯೂ ಇತ್ತು. ಗದ್ದೆ ಉತ್ತು, ಎತ್ತುಗಳನ್ನು ಮೀಯಿಸಿ, ಮೇಯಿಸಿ; ನೊಗ, ನೇಗಿಲನ್ನು ಶುಚಿಗೊಳಿಸಿ, ಯಥಾಸ್ಥಾನದಲ್ಲಿಟ್ಟು, ತಾನೂ ಶುಚಿಯಾಗಿ ಜಗಲಿಯಲ್ಲಿ ಜಪ್ಪನೆ ಕೂರಿ, 'ಅಜ್ಜಮ್ಮಾ.. ಯಾನ್ ಬತ್ತೆ' ಎಂದಾಗ ನನ್ನ ಪದ್ದಜ್ಜಿ ಏಳೆಂಟು ದೋಸೆ, ದೊಡ್ಡ ಚೆಂಬಲ್ಲಿ ಕಾಪಿ ಜತೆಗೆ ವೀಳ್ಯದ ಹರಿವಾಣ ತಂದಿಡುವ ದೃಶ್ಯ ಕಣ್ಣೆದುರು ಬರುತ್ತದೆ.

ಇಂತಹ 'ಫಿನಿಶಿಂಗ್' ಇರುವ ಎಷ್ಟು ಮಂದಿ ನಮ್ಮ ನಡುವೆ ಇಲ್ಲ. ಅಂತಹವರನ್ನು ಮಾತನಾಡಿಸುವುದು ಬಿಡಿ, ಅವರ ಕೆಲಸದ ಚಂದವನ್ನೂ ನೋಡುವ ಮನಸ್ಸು ನಮಗಿರುವುದಿಲ್ಲ.

ಧಾರವಾಡದ ಶಿವರಾಂ ಪೈಲೂರು ಅವರ ಮನೆಗೊಮ್ಮೆ ಹೋಗಿ. ಅಲ್ಲಿನ ಪ್ರತೀಯೊಂದು ವಸ್ತುವೂ ಒಪ್ಪ ಓರಣವಾಗಿರುವುದು. ಅವರು ಬರೆವ ಕಾಗದ, ಅದನ್ನು ಕವರಿಗೆ ತುಂಬಿಸುವ ರೀತಿ, ವಿಳಾಸ ಬರೆವ ಪರಿ, ಅಂಚೆ ಚೀಟಿ ಅಂಟಿಸುವ ತನಕದ ಸುಭಗತೆ. ಚಿತ್ರ ಕಲಾವಿದ ಶಿವರಾಮ್ ಅವರನ್ನೊಮ್ಮೆ ನೋಡಿ. ಅವರಲ್ಲಿರುವ ಪುಸ್ತಕಗಳ ಅಂಚುಗಳು ಒಂಚೂರೂ ಮಡಚಿರುವುದಿಲ್ಲ. ಹತ್ತು ವರುಷದ ಹಿಂದಿನ ಕೆಲವು ಪುಸ್ತಕಗಳು ಹೊಸತರಂತೆ ಇವೆ. ಪ್ರತೀಯೊಂದು ಅಕ್ಷರ ಬರೆವಾಗಲೂ ಕೊಡುತ್ತಾರೆ- 'ಫಿನಿಶಿಂಗ್'! ಈ ಅಕ್ಷರಗಳ ಮುಂದೆ ನಮ್ಮ ಕಂಪ್ಯೂಟರಿನ 'ಫಾಂಟ್'ಗಳು ನಾಚಬೇಕು.

ಇಂತಹ ನೋಟ ಯಾ ಫಿನಿಶಿಂಗ್ ಇದೆಯಲ್ಲಾ - ಇವೆಲ್ಲಾ ಕಲಿತು ಬರುವುದಲ್ಲ. ಕೆಲಸಗಳಲ್ಲಿ 'ಫಿನಿಶಿಂಗ್' ಇರುವ ಅಪ್ಪಣ್ಣರಂತಹ, ದೇರಪ್ಪರಂತಹ, ಮುಂಡಪ್ಪರಂತಹ ಹಿರಿಯರ ಕೆಲಸಗಳೆಲ್ಲಾ ಕಾಲದ ಅಲಿಖಿತ ದಾಖಲೆಗಳು. ಇವರ ಕೆಲಸಗಳಿಗೆ ಜನರೇ ಅಂದು ಹಾರ್ದಿಕವಾಗಿ ಕೊಟ್ಟ ಗೌರವ ಇದೆಯಲ್ಲಾ - ಅದುವೇ ನಿಜವಾದ ಅಲಿಖಿತ ಪೇಟೆಂಟ್!

Tuesday, December 1, 2009

ಹಸಿರು ಪ್ರೀತಿಯ ಏಜಿಯಂ!

ಮಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕಿನ ಏಜಿಯೆಂ (ಅಸಿಸ್ಟಾಂಟ್ ಜನರಲ್ ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕ) ಚೈತನ್ಯ ಎಂ.ತಲ್ಲೂರು. ಎಲ್ಲಾ ಏಜಿಯೆಂಗಳಿಗಿರುವಂತೆ ಸವಲತ್ತಿದೆ. ಸ್ಟೇಟಸ್ ಇದೆ. ಆದರೆ ಇವರೆಂದೂ 'ಮಗುಮ್ಮಾಗಿ'ರುವುದಿಲ್ಲ. ಇವರಿಗೆ 'ಮಾತೇ ಮಾಣಿಕ್ಯ'. ಕೃಷಿಯ ಸುದ್ದಿ ಬಂದಾಗ ಇವರ ಮೈಯೆಲ್ಲಾ ಕಣ್ಣಾಗುತ್ತದೆ!

ವಾಸ್ತವ್ಯದ ಮನೆ? ದುಬಾರಿ ಕ್ರೋಟಾನ್, ಗುಲಾಬಿ, ಲಾನಿನ ಹುಲ್ಲಿನಿಂದ ಅಂದವರ್ಧನೆ. ಇದಕ್ಕೊಬ್ಬ ಮಾಲಿ. ನಿತ್ಯ ನೀರೆರೆಯುವ 'ದೊಡ್ಡ' ಕೆಲಸ. ಗಿಡಗಳು ನೆಲಕಚ್ಚಿದಾಗ ಮತ್ತೆ ಪುನಃ ತಂದು ನೆಡುವುದು. ನೀರು ಹಾಕುವುದು, ಆರೈಕೆ ಮಾಡುವುದು - ಇಷ್ಟು ಕೆಲಸ. ಅನಾವಶ್ಯಕವಾದ ಈ 'ಸಾಂಪ್ರದಾಯಿಕ' ಕೆಲಸಕ್ಕೆ ತಲ್ಲೂರು ತಡೆಯಾಜ್ಞೆ! ಅಲ್ಲೆಲ್ಲಾ ತರಕಾರಿ ಕೃಷಿ. ಮಾಲಿ ಅದಕ್ಕೆ ಹೊಂದಿಕೊಂಡಿದ್ದಾರೆ.

ತಲ್ಲೂರು ತರಕಾರಿ ಬೆಳೆಯಬೇಕಾಗಿಲ್ಲ. ತಿಂಗಳ ಕೊನೆಗೆ ಗರಿಗರಿ ಎಣಿಸುವ ಹುದ್ದೆ. ಎಡಗೈಗೆ, ಬಲಗೈಗೆ ಸಹಾಯಕರು. ಓಡಲು ಕಾರು - ಎಲ್ಲವೂ ಇದೆ. 'ಸಹಜವಾಗಿ ಬದುಕಬೇಕು' ಎನ್ನುವುದು ಜಾಯಮಾನ. 'ವಿಷರಹಿತವಾಗಿ ಒಂದಾರು ತಿಂಗಳಾದರೂ ತರಕಾರಿ ತಿನ್ನಬಹುದಲ್ಲಾ' ಎನ್ನುತ್ತಾರೆ.

ಕಳೆದ ವರುಷ ಮೆಣಸು, ಮೂಲಂಗಿ, ಬದನೆ, ಅಲಸಂಡೆ, ನಾಲ್ಕು ವಿಧದ ಬೀನ್ಸ್ ಬರೋಬ್ಬರಿ. ಈ ವರುಷ ಬದನೆ, ಅಲಸಂಡೆ, ಅವರೆಯ ಸರದಿ. ಟೊಮ್ಯಾಟೋ ಗಿಡಗಳದ್ದೇ ಸಿಂಹಪಾಲು. 'ದಿನಂಪ್ರತಿ ಎಂಟ್ಹತ್ತು ಟೊಮೆಟೋ ಸಿಕ್ಕೇ ಸಿಕ್ತದೆ. ಅದರ ಸಲಾಡ್, ಸಾಸ್ ಇಲ್ಲದೆ ಊಟವಿಲ್ಲ'. ಕುಂಡಗಳಲ್ಲಿ ಬ್ರಾಹ್ಮಿ, ಒಂದೆಲಗ. ಈಗ 'ಯಾಮ್ ಬೀನ್' ಎಂಬ ಗೆಡ್ಡೆತರಕಾರಿ ಅವರ ತೋಟದ ಹೊಸ ಅತಿಥಿ!

ಒಂದು ಕೊತ್ತಂಬರಿ ಸೊಪ್ಪಿನ ಕಟ್ಟು, ಶುಂಠಿಯ ತುಂಡು ಬೇಕೆಂದರೂ, ಬೈಕ್ ಚಾಲೂ ಮಾಡಿ ಮಾರುಕಟ್ಟೆಗೆ ಹೋಗಬೇಕು. ಟ್ರಾಫಿಕ್ ಜಾಂ ಬೇರೆ. ವಾಹನ ನಿಲುಗಡೆಗೆ ಮೊದಲೇ ಸ್ಥಳವಿಲ್ಲ. ಯಾರ್ಯಾರದ್ದೋ ಪಿರಿಪಿರಿ! ಒಂದಷ್ಟು ಮಾಲಿನ್ಯ ಸೇವನೆ. ಜತೆಗೆ ಟೆನ್ಶನ್. ಇದನ್ನೆಲ್ಲಾ ಅನುಭವಿಸಿ ಮನೆ ಸೇರಿದಾಗ ಕೊತ್ತಂಬರಿ ಸೊಪ್ಪು ಬಾಡಿರುತ್ತದೆ! ಪೇಟೆಯ ಜೀವನವನ್ನು ತಲ್ಲೂರು ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.

ಮಾತನಾಡುತ್ತಿದ್ದಂತೆ - 'ಶುಂಠಿ ನಮ್ಮ ನಿರಖು ಠೇವಣಿ. ಇಷ್ಟದ ದಾಲ್ ತೊವ್ವೆಗೆ ಇದಿಲ್ಲದೆ ರುಚಿಯೇ ಇಲ್ಲ. ಹಿತ್ತಿಲಿನಲ್ಲಿದೆ, ಬೇಕಾದಾಗ ಠೇವಣಿ ಮುರಿದರಾಯಿತು' ಮನೆಯೊಡತಿ ಅನಿತಾ ದನಿಸೇರಿಸಿದರು.

'ಮಂಗಳೂರಿಗೆ ಒಂದು ದಿವಸ ತರಕಾರಿಯ ಲಾರಿ ಬಾರದಿದ್ದರೆ ಇಲ್ಲಿನ ಅಡುಗೆ ಮನೆಗಳಲ್ಲಿ ಸಾಂಬಾರು ಆಗುವುದೇ ಇಲ್ಲ'! ಹತ್ತು ರೂಪಾಯಿಯ ತರಕಾರಿಗೆ ನೂರು ರೂಪಾಯಿ ಆಗುತ್ತದೆ - ವಾಸ್ತವದತ್ತ ಬೆಳಕು ಚೆಲ್ಲುತ್ತಾರೆ.

ನಿತ್ಯ ಬೆಳಿಗ್ಗೆ ಒಂದಷ್ಟು ಹೊತ್ತು ಗಿಡಗಳ ಜತೆ. 'ಇದೆಲ್ಲಾ ಸಹಾಯಕರನ್ನು ನಂಬಿ ಮಾಡುವ ಕೆಲಸವಲ್ಲ. ಸ್ವತಃ ಮಾಡಿದಾಗ ತರಕಾರಿಯ ರುಚಿಯೇ ಬೇರೆ'. 'ತನ್ನ ಮಕ್ಕಳಿಗಿಂತ ಹೆಚ್ಚು ಗಿಡಗಳನ್ನು ಪ್ರೀತಿಸುತ್ತಾರೆ. ಒಂದು ಗಿಡಕ್ಕೆ ಏಟಾದರೂ ಅವರು ಸಹಿಸುವುದಿಲ್ಲ.' ಗಂಡನ ಕೆಲಸಕ್ಕೆ ಅನಿತಾ ಸಹಮತ.

ಸರಿ, ತರಕಾರಿ ಬೆಳೆಯುತ್ತಾರೆ. ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಮಂದಿ. ಇಷ್ಟು ಮಂದಿಗೆ ಇಷ್ಟೊಂದು ತರಕಾರಿ ಬೇಕಾ? ಪ್ರಶ್ನೆ ಸಹಜವಾಗಿ ಮೂಡುತ್ತದೆ. 'ಬ್ಯಾಂಕಿನ ಕ್ಯಾಂಟಿನ್ಗೆ ಈ ತರಕಾರಿ. ಸಾಂಬಾರಿಗೂ ಇದೇ. ಬ್ಯಾಂಕಿನಲ್ಲಿ ನನ್ನ ತರಕಾರಿಗೆ ಗಿರಾಕಿಗಳಿದ್ದಾರೆ. ಹಣಕ್ಕಾಗಿ ಅಲ್ಲ. ಇನ್ನೂ ಹೆಚ್ಚು ಉಳಿದರೆ ಗಣಕಯಂತ್ರದಲ್ಲಿ 'ತಾಜಾ ತರಕಾರಿ ಕ್ಯಾಂಟಿನ್ನಲ್ಲಿ ಲಭ್ಯ' ಅಂತ ಬರೆದುಬಿಡುತ್ತೇನೆ. ಪ್ರತೀ ಟೇಬಲ್ಗೂ ಗಣಕಯಂತ್ರವಿದೆ. ತೆರೆದಾಕ್ಷಣ ತರಕಾರಿ ಕತೆ ಬಂದುಬಿಡುತ್ತದೆ'. ನಿರ್ವಿಷ ತರಕಾರಿ ಹಂಚುವ ತಲ್ಲೂರು ತಂತ್ರವಿದು.

ಬಸವರಾಜ್ ಮಾಲಿ. ಜನರೇಟರ್ ಉಸ್ತುವಾರಿಯ ಮಹೇಶ್ - ಇವರಿಬ್ಬರು ತಲ್ಲೂರು ತರಕಾರಿ ಕೃಷಿಯಲ್ಲಿ ಸಹಕರಿಸುವವರು. ಹಗಲುಹೊತ್ತು ಗಿಡಗಳ ಉಸ್ತುವಾರಿ ಇವರದ್ದೇ. 'ಸಾಹೇಬ್ರು ಏನೋ ಮಾಡ್ತಾರೆ' ಅಂತ ಗೊತ್ತಿದೆ. 'ಮೇಲಧಿಕಾರಿ ಅಲ್ವಾ' ಅಂತ ಸ್ಪಂದಿಸುತ್ತಾರೆ. ಈಗಂತೂ ತರಕಾರಿ ಕೃಷಿಯಲ್ಲಿ ಅವರು ಸ್ಪೆಷಲಿಸ್ಟ್

ತರಕಾರಿ ಕೃಷಿಗೆ ಯಾವುದೇ ರಾಸಾಯನಿಕ ಇದುವರೆಗೆ ಬಳಸಿಲ್ಲ. ನೈಸರ್ಗಿಕವಾಗಿ ಬೆಳೆದಾಗ ತರಕಾರಿ ರುಚಿ. ಕೆಲವೊಂದು ಕೀಟಗಳು ಬಾಧೆ ಕೊಡುತ್ತಿವೆ. ವಿಷರಹಿತ ಚಿಕಿತ್ಸೆಯ ಹುಡುಕಾಟದಲ್ಲಿದ್ದಾರೆ.

ತಲ್ಲೂರು ಕೃಷಿಕ ಅಲ್ಲ! ಮೂಡಿಗೆರೆಯಲ್ಲಿ ಬ್ಯಾಂಕಿನ ಕೃಷಿ ವಿಭಾಗದ ಕ್ಷೇತ್ರಾಧಿಕಾರಿಯಾಗಿದ್ದರು. ಕೃಷಿಕರೊಂದಿಗೆ ಬೆರೆಯುವ ಅವಕಾಶ ಪ್ರಾಪ್ತವಾದುದರಿಂದ, 'ನಾನೂ ಕೃಷಿ ಮಾಡಬೇಕು' ಎಂಬು ತುಡಿತ ಶುರುವಾಗಿತ್ತು. ಅದು ಅನುಷ್ಠಾನಕ್ಕೆ ಬಂದುದು ಮಂಗಳೂರಿನಲ್ಲಿ.

ಮನೆಸುತ್ತ ತರಕಾರಿ ಗಿಡಗಳು ತುಂಬಿವೆ. 'ಜಾಗವಿಲ್ಲವಲ್ಲಾ' ಕೊರಗು. ತಾರಸಿಯಲ್ಲಿ ಬೆಳೆಸಿದರೆ ಹೇಗೆ? ಆಲೋಚನೆಯಲ್ಲಿದ್ದಾರೆ ಏಜಿಯಂ. ತಲ್ಲೂರು ದಂಪತಿಗಳ 'ತರಕಾರಿ ಬ್ಯಾಂಕಿಂಗ್'ನಲ್ಲಿ ನೋಡುವಂತಹ, ತಿಳಿದುಕೊಳ್ಳುವಂತಹ ವಿಚಾರ ಇಲ್ಲದಿರಬಹುದು. ಆದರೆ ಕುತೂಹಲ. ಪ್ರಯತ್ನ ಮತ್ತು ಪ್ರಯೋಗ ಸೇರಿದೆ.

Sunday, November 29, 2009

ಎಳನೀರ ಕಣ್ಣೀರಿಗೆ ಶಾಪಮೋಕ್ಷ!

ತುಮಕೂರು ಜಿಲ್ಲೆಯ ಬಿಳಿಗೆರೆಯ 'ಎಳನೀರು ಮೇಳ'ಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಬಸ್ಸಿಗೆ ವಿರಾಮವಿತ್ತು. ನಮ್ಮ ಸರಕಾರಿ ಬಸ್ಸೇ ಹಾಗಲ್ವಾ.. 'ಅವರಿಗಿಷ್ಟ ಬಂದಲ್ಲಿ ನಿಲುಗಡೆ, ಊಟ-ತಿಂಡಿ'! 'ಬನ್ರಿ..ಎಳನೀರು ಕುಡೀರಿ..ಇದು ಊರಿದ್ದು..ಹದಿನಾರು ರೂಪಾಯಿ. ಇದು ಹಾಸನ ಕಡೆಯವು..ಹತ್ತೇ ರೂಪಾಯಿ..' ಎಳನೀರನ್ನು ಪೇರಿಸಿಟ್ಟ ಗಾಡಿವಾಲಾನಿಂದ ನಾನ್ಸ್ಟಾಪ್ ಉವಾಚ!

'ಎಳನೀರಿಗೆ ಹದಿನಾರು ರೂಪಾಯಿ'! 'ಗೆಂದಾಳಿ'ಗೆ ಇಪ್ಪತ್ತಂತೆ! ಇದೇ ಗುಂಗಿನಲ್ಲಿ ಬಿಳಿಗೆರೆ ಎಳನೀರು ಮೇಳ ತಲುಪಿದಾಗ, 'ಬನ್ರಿ ಕೇವಲ ಐದು ರೂಪಾಯಿ.. ಮೇಳದ ಆಫರ್.. ಮತ್ತದೇ ಕೂಗು! ಮತ್ತೆ ತಿಳಿಯಿತು - 'ಇಲ್ಲಿ ಎಳನೀರು ಬಳಕೆಯೇ ಇಲ್ಲ.' ದಶಕಕ್ಕಿಂತಲೂ ಹಿಂದೆ ತೆಂಗಿನಕಾಯಿಯನ್ನು ಕೇಳುವವರು ಇಲ್ಲದೇ ಇದ್ದ ಹೊತ್ತಲ್ಲಿ ದಕ್ಷಿಣ ಕನ್ನಡದಲ್ಲಿ 'ಬೊಂಡ ಮೇಳ' ಯಶಸ್ವಿಯಾಗಿತ್ತು.

'ಸರ್.. ಇಲ್ಲಿ ಎಳ್ನೀರ್ ಕುಡಿಯೋರಿಲ್ಲ. ಎಳ್ನೀರ್ ಕೀಳೋದು ಬದುಕಿನಲ್ಲಿ ದಟ್ಟ ದರಿದ್ರ ಸ್ಥಿತಿ ತಲುಪಿರೋರು ಮಾತ್ರ ಎಂಬ ಭಾವನೆ ಇದೆ. ಒಂದು ವೇಳೆ ಕುಡಿಯುವುದಿದ್ದರೂ ಮರದಿಂದ ಬಿದ್ದವನ್ನು ಮಾತ್ರ ಕುಡಿಯೋದು' ಮೇಳದ ಸಂಘಟಕ ಬಿಳಿಗೆರೆ ಕೃಷ್ಣಮೂರ್ತಿ ಆಶಯವನ್ನು ಕಟ್ಟಿಕೊಟ್ಟರು.

ತುಮಕೂರು ಜಿಲ್ಲೆಯಲ್ಲಿ ತೆಂಗನ್ನು ಕೊಬ್ಬರಿ ಮಾಡಿ ಮಾರುವ ಪಾರಂಪರಿಕ ಪದ್ಧತಿಗೆ ಜನ ಒಗ್ಗಿಹೋಗಿದ್ದಾರೆ. ಆರ್ಥಿಕವಾಗಿ ಕೃಷಿಕರಿಗಿದು ಆಧಾರ. ಇಲ್ಲಿನ ಬಹುಪಾಲು ಕೊಬ್ಬರಿಗೆ ಉತ್ತರ ಭಾರತ ಮಾರುಕಟ್ಟೆ. ತುಮಕೂರು, ಪಕ್ಕದ ಹಾಸನ ಜಿಲ್ಲೆಯವರೆಗಿನ ಕೊಬ್ಬರಿಗಳೆಲ್ಲಾ 'ತುಮಕೂರು ಕೊಬ್ಬರಿ' ಅಂತಲೇ ಪ್ರಸಿದ್ಧ.

ದರದಲ್ಲಿ ಸ್ಥಿರತೆಯಿಲ್ಲ. ಈ ವರುಷ ಬಂಪರ್ ಬೆಲೆಯಾದರೆ ಮುಂದಿನ ವರುಷ ಕಣ್ಣೀರು! ಎಲ್ಲವೂ ಉದ್ದಿಮೆಗಳ ಮತ್ತು ವ್ಯಾಪಾರಿಗಳ ಮುಷ್ಠಿಯೊಳಗೆ! 'ಕೊಬ್ಬರಿ ಕ್ವಿಂಟಾಲಿಗೆ ಎರಡೂವರೆ ಸಾವಿರ ಆದುದೂ ಇದೆ. ಕನಿಷ್ಠ ಆರು ಸಾವಿರವಾದರೂ ಸಿಗಲೇ ಬೇಕು. ಪ್ರಸ್ತುತ ನಾಲ್ಕೂವರೆ ಸಾವಿರದ ಹತ್ತಿರ ದರವಿದೆ' ಅಂಕಿಅಂಶ ಮುಂದಿಡುತ್ತಾರೆ ಬಿಳಿಗೆರೆಯ ಕೃಷಿಕ ಮುಹಾಲಿಂಗಯ್ಯ.

ಹತ್ತಿರದಲ್ಲೇ ಹೆದ್ದಾರಿಯಿದ್ದರೂ ಎಳನೀರು ಮಾರಾಟದ ಒಂದೇ ಒಂದು 'ಗಾಡಿ' ಕಾಣ ಸಿಗುವುದಿಲ್ಲ. 'ಎಳನೀರಿನಲ್ಲಿ ನಷ್ಟ - ಕೊಬ್ಬರಿಯಲ್ಲಿ ಲಾಭ' ಎನ್ನುವ ಭಾವನೆ. ಎಳನೀರಿನಿಂದ ಕಾಯಿ ಆಗಲು ಏಳೆಂಟು ತಿಂಗಳು ಬೇಕು. ಕಿತ್ತ ಕಾಯಿಗೆ ಮತ್ತೆ ಅಷ್ಟೇ ತಿಂಗಳು ಗೃಹಬಂಧನ. ಸುಮಾರು ಒಂದೂವರೆ ವರುಷದ ಪ್ರಕ್ರಿಯೆ. ನಂತರವಷ್ಟೇ ಇಳಿಸಿ ಸಿಪ್ಪಿ ಬಿಚ್ಚಿ, ಗೆರಟೆ ಕಳಚಿದ ಕೊಬ್ಬರಿ ಮಾರುಕಟ್ಟೆಗೆ.

ಮೇಳದಲ್ಲಿ ಭಾಗವಹಿಸಿದ ಮೀಯಪದವಿಯ ಡಾ.ಡಿ.ಕೆ.ಚೌಟ ಅವರು ಮುಂದಿಟ್ಟ ಸೂಕ್ಷ್ಮ ಲೆಕ್ಕಾಚಾರವು ಮೇಳ ಮುಗಿದ ನಂತರವೂ ಮಾತಿನ ವಿಷಯವಾಗಿತ್ತು - 'ಕೊಬ್ಬರಿಗಿಂತ ಎಳನೀರು ಮಾರಾಟ ಮಾಡಿದರೆ ಒಂದೂವರೆ ವರುಷ ಮೊದಲೇ ಹಣ ಸಿಗುತ್ತದೆ. ಕೊಬ್ಬರಿ ಮಾಡಿಯೇ ಮಾರಾಟ ಮಾಡಬೇಕೆಂದರೆ ಕಾಯಬೇಕು. ನಿರೀಕ್ಷಿತ ದರ ಸಿಕ್ಕರೆ ಓಕೆ. ಇಲ್ಲದಿದ್ದರೆ ಅದೃಷ್ಟವನ್ನು ಯಾಕೆ ಹಳಿಯಬೇಕು? ಎಳನೀರಿಗೆ ಆರು ರೂಪಾಯಿ ಸಿಕ್ಕರೆ, ಕೊಬ್ಬರಿಗೆ ಏಳು ಸಿಗಲೇ ಬೇಕಲ್ವಾ.. ಅಷ್ಟು ಸಿಗುತ್ತಾ? ನನ್ನ ಅನುಭವದಂತೆ ಎಳನೀರು ಕಿತ್ತರೆ ಮುಂದಿನ ಋತುವಿನಲ್ಲಿ ಹೆಚ್ಚು ಕಾಯಿ ಹಿಡಿವ ಕ್ಷಮತೆಯನ್ನು ಮರವೇ ವೃದ್ಧಿಸಿಕೊಳ್ಳುತ್ತದೆ. ತೆಂಗು ಮಾಗುವ ತನಕದ ನೀರು-ಗೊಬ್ಬರ ಪರೋಕ್ಷ ಉಳಿತಾಯವಲ್ವಾ'.

ಇಲ್ಲಿ ಎಳನೀರು ಮಾರಲು ಕೆಲವು ಪ್ರಾಕ್ಟಿಕಲ್ ಸಮಸ್ಯೆಯಿದೆ. ಮರವೇರಲು ಜನ ಸಿಕ್ಕದೇ ಇರುವುದು ಒಂದಾದರೆ, ಎಳನೀರು ಮಾರುವವ ದರಿದ್ರ ಸ್ಥಿತಿಗೆ ತಲುಪಿದವ ಎಂಬ ಮಾನಸಿಕ ತಡೆ! (ಮೆಂಟಲ್ ಬ್ಲಾಕ್) ಈ ಸ್ಥಿತಿಯನ್ನು ಮೇಳದ ಸಾರಥ್ಯ ವಹಿಸಿದ ಕೃಷ್ಣ ಮೂರ್ತಿ, ವಿಶ್ವನಾಥ್ ಮತ್ತು ಸಮಾನಾಸಕ್ತರು ಬದಲಾಯಿಸುವ ನಿರ್ಧಾರ ಮಾಡಿದರು. ಬಿಳಿಗೆರೆಯಲ್ಲೇ 'ಎಳನೀರ್ ಊರ್' ಎಂಬ ಮಾರಾಟ ಮಳಿಗೆ ಆರಂಭ. 'ಎಳನೀರು ಕುಡಿಯಿರಿ - ಆರೋಗ್ಯ ವೃದ್ಧಿಸಿಕೊಳ್ಳಿ' ಅಂತ ಪ್ರಚಾರ ಫಲಕಗಳು. 'ಕೆಲವರು ಗೇಲಿ ಮಾಡಿದರು - ಇನ್ನೂ ಕೆಲವರು ಮುಖ ತಿರುಗಿಸಿದರು' ನೆನಪಿಸುತ್ತಾರೆ ಕೃಷ್ಣ ಮೂರ್ತಿ.

ಮಾರಾಟ ವ್ಯವಸ್ಥೆಗಾಗಿ 'ಸೌಹಾರ್ದ ಸಹಕಾರಿ ಸಂಘ' ಸ್ಥಾಪನೆ. ಸದಸ್ಯತನಕ್ಕೆ ಮುನ್ನೂರೈವತ್ತು ರೂಪಾಯಿ. ಈಗಾಗಲೇ ಸಂಘಕ್ಕೆ ನಲವತ್ತು ಮಂದಿ (ಸದಸ್ಯರು) ಎಳನೀರು ನೀಡಲು ಮುಂದಾಗಿದ್ದಾರೆ! ಎಳನೀರು ಕೊಯ್ಲಿಗೆ ಸಂಘದಿಂದ ನಿಯುಕ್ತಿ ಹೊಂದಿದ ಸಿಬ್ಬಂದಿ. ಕೀಳಲು ಒಂದು ರೂಪಾಯಿ. ಕೆತ್ತಿ ಕೊಡಲು ಪುನಃ ಒಂದು ರೂಪಾಯಿ. ಒಂಭತ್ತು ರೂಪಾಯಿಗೆ ಮಾರಾಟ. ದಿನಕ್ಕೆ ಏನಿಲ್ಲವೆಂದರೂ ನೂರಕ್ಕೂ ಮಿಕ್ಕಿ ಮಾರಾಟ.

'ರೊಕ್ಕ ತಕ್ಷಣ ಸಿಗುತ್ತದಲ್ವಾ. ಹಾಗಾಗಿ ಎಳನೀರು ತಂದು ಕೊಡುವಷ್ಟು ಕೆಲವು ಕೃಷಿಕರು ತಯಾರಾಗಿದ್ದಾರೆ. ಇನ್ನಷ್ಟು ಸಿದ್ಧರಾಗುತ್ತಿದ್ದಾರೆ' ಎನ್ನುತ್ತಾರೆ ಸಂಘದ ಅಧ್ಯಕ್ಷ ಶಿವಶಂಕರಪ್ಪ. ಎಳನೀರು ಒದಗಿಸುವ ರೈತರ ಸಂಖ್ಯೆ ಹೆಚ್ಚಾದರೆ ತುಮಕೂರಿನಲ್ಲೂ ಮಳಿಗೆಯೊಂದನ್ನು ತೆರೆಯುವ ಆಸೆ ಇವರಿಗಿದೆ. ಹೆದ್ದಾರಿಯಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಮಳಿಗೆ ತೆರೆಯುವುದು ಸಂಘದ ನಿಕಟ ಭವಿಷ್ಯದ ಯೋಜನೆ-ಯೋಚನೆ.

ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಬೆಳೆದ ಎಲ್ಲವನ್ನೂ ಕೊಬ್ಬರಿ ಮಾಡಿದರೆ ಉಳಿಗಾಲವಿಲ್ಲ ಎಂಬ ಸತ್ಯ ಕೆಲವು ಕೃಷಿಕರಿಗೆ ಮನವರಿಕೆಯಾಗಿದೆ. ಬೆಳೆದ ಅರ್ಧದಷ್ಟಾದರೂ ಎಳನೀರು ಮಾರಾಟ, ಮೌಲ್ಯವರ್ಧನೆ ಮಾಡುವ ಮೂಲಕವೋ ಮಾರುಕಟ್ಟೆ ಮಾಡಲೇಬೇಕು - ಎಂಬ ವಿಚಾರ ತಲೆಯೊಳಗೆ ಹೊಕ್ಕಿರುವುದು ಸಂತೋಷ ಸುದ್ದಿ.

ಇದೆಲ್ಲಾ ಒಬ್ಬಿಬ್ಬರು ಮಾಡುವಂತಹುದಲ್ಲ. ಸಮಷ್ಠಿ ಕೆಲಸ. ಆಗಲೇ ಸಮಸ್ಯೆಗೆ ಪರಿಹಾರ. ಎಳನೀರು ಮಾರಾಟ ಸಾಧ್ಯವೇ ಇಲ್ಲ ಎನ್ನುವ ಬಿಳಿಗೆರೆಯಲ್ಲಿ 'ಎಳನೀರು ಸ್ಟಾಲ್' ಶುರುವಾದುದು ಇತಿಹಾಸ. ಮೀಯಪದವಿನ ಡಾ.ಚೌಟರು ತಮ್ಮೂರಿನಲ್ಲಿ ಎಳನೀರಿಗೆ ಮಾರುಕಟ್ಟೆಯನ್ನು ರೂಪಿಸಿರುವ ಯಶೋಗಾಥೆ ಮುಂದಿದೆ. ಇಲ್ಲಿ ಎಳನೀರು ಕುಡಿಯುವವರು ಯಾರು ಗೊತ್ತಾ - ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು!

'ನಾವೂ ಮೀಯಪದವಿನಂತೆ ಮಾರುಕಟ್ಟೆ ಹಿಡಿದು ಬದುಕಿನ ನರಳಾಟವನ್ನು ಯಾಕೆ ಕಡಿಮೆಗೊಳಿಸಬಾರದು' ಮೇಳದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿಗಳಾದ ಲಿಂಗದೇವರು ಹಳೆಮನೆ ರೈತರಿಗೆ ವಿಶ್ವಾಸ ತುಂಬುತ್ತಾ, 'ತೆಂಗು, ಕೊಬ್ಬರಿ ಅಂತ ವ್ಯಾಪಾರಿಗಳಲ್ಲಿ ಮುಂಗಡ ತೆಕ್ಕೊಂಡು, ಸಾಲ ಮಾಡಿ, ಅದರ ಬಡ್ಡಿ ಕಟ್ಟಲೂ ಹರ ಸಾಹಸ ಪಡುತ್ತಾ ಜೀವಿಸೋದಕ್ಕಿಂತ ಸುಲಭದಲ್ಲಿ ರೊಕ್ಕ ಬರುವ ಎಳನೀರನ್ನು ಮಾರ್ರಿ. ಮೌಢ್ಯವನ್ನು ಕಟ್ಟಿಡಿ' ಎಂದರು. ಮುಂದಿನ ಬದಲಾವಣೆ ಕಣ್ಣ ಮುಂದಿದೆ.
ಇಷ್ಟೆಲ್ಲಾ ಮಾಡಿದರೂ, 'ವಾರಕ್ಕೆ ಕನಿಷ್ಠ ಹತ್ತು ಸಾವಿರ ಎಳನೀರಿಗೆ ಬೇರೆಡೆಯಿಂದ ಬೇಡಿಕೆಯಿದೆ. ಎಳನೀರೂ ಮರದಲ್ಲಿದೆ. ಆದರೆ ರೈತರು ಕೊಡೊಲ್ಲ' ರೈತರ ಮನೋಸ್ಥಿತಿಗೆ ವಿಷಾದಿಸುತ್ತಾರೆ ಬಿಳಿಗೆರೆ ಕೃಷ್ಣ ಮೂರ್ತಿ..